ಹಾಕಿ
	ಭಾರತದ ರಾಷ್ಟ್ರೀಯ ಕ್ರೀಡೆ. ಈಗ ಅನೇಕ ದೇಶಗಳು ಹಾಕಿ ಕ್ರೀಡೆಯನ್ನು ಆಡುತ್ತಿವೆ. ಇದು ತೀವ್ರ ವೇಗದ, ರೋಮಾಂಚಕ ಆಟ. ಆಟಗಾರರು ತಮ್ಮ ಸ್ಟಿಕ್‍ಗಳಿಂದ ಚೆಂಡನ್ನು ಎದುರಾಳಿ ಗೋಲ್‍ನೊಳಕ್ಕೆ ಹೊಡೆದು ಗೋಲ್ ಮಾಡಿ ಗೆಲ್ಲುವುದೇ ಈ ಆಟದ ವೈಶಿಷ್ಟ್ಯ. ಹಾಕಿಯಲ್ಲಿ ಫೀಲ್ಡ್ ಹಾಕಿಯಂತೆ ಐಸ್ ಹಾಕಿ ಎಂಬ ಪ್ರಭೇದವೂ ಇದೆ. 

	ಹಾಕಿಯ ಚರಿತ್ರೆ ಅಸ್ಪಷ್ಟವಾಗಿದೆ. ಪುರಾತನ ಗ್ರೀಕರು ಇದನ್ನಾಡುತ್ತಿದ್ದ ಬಗ್ಗೆ ಇಂಥದ್ದೊಂದು ಆಟವಾಡುವ ಪುರುಷರ ಉಬ್ಬು ಚಿತ್ರಗಳು ದೊರೆತಿವೆ. ಇಂಗ್ಲೆಂಡಿನಲ್ಲಿ 1838ರಿಂದ, ಕಲ್ಕತ್ತದಲ್ಲಿ 1885ರಿಂದ ಹಾಕಿಯನ್ನು ಆಡುತ್ತಿದ್ದ ಬಗ್ಗೆ ಪುರಾವೆಗಳಿವೆ. ಹಾಕಿಗೆ ಹಲವು ಹೆಸರುಗಳಿದ್ದವು. ಪರ್ಷಿಯನ್ನರು ಪೋಲೊ ಎಂದೂ ಸ್ಕಾಟ್ಲೆಂಡಿನವರು ಶಿಂಟ ಎಂದೂ ಐರ್ಲೆಂಡಿನವರು ಹರ್ಲಿ ಎಂದೂ ರೋಮನರು ಪಗನಾಶಿಯ ಎಂದೂ ಇಂಗ್ಲಿಷರು ಬ್ಯಾಂಡಿ ಎಂದೂ ಫ್ರೆಂಚರು ಹಕೆಟ್ ಎಂದೂ ಕರೆಯುತ್ತಿದ್ದ ಈ ಆಟಕ್ಕೆ ಫ್ರೆಂಚ್ ಪದ ಹೂಕೆ ಅಂದರೆ, ಬಾಗು ಎಂಬ ಅರ್ಥದ ಪದದಿಂದ ಹಾಕಿ ಎಂಬ ಹೆಸರು ಬಂತೆನ್ನಲಾಗಿದೆ. ಆಧುನಿಕ ಹಾಕಿ ರೂಪುಗೊಂಡಿದ್ದು ಇಂಗ್ಲೆಂಡಿನಲ್ಲಿ(1838). ಟಿಡ್ಡಿಂಗ್‍ಟನ್ ಹಾಕಿಕ್ಲಬ್‍ನ ಬದಗಲ್ ವೆಸ್ಟ್‍ಕಾಮ್ ಆಧುನಿಕ ಹಾಕಿಯ ಜನಕ. ಭಾರತದ ಗ್ವಾಲಿಯರ್‍ನಲ್ಲಿ ಭಾರತೀಯ ಹಾಕಿ ಫೆಡರೇಷನ್ ರಚಿತವಾಗಿ (1925) ಇದರ ಕಚೇರಿ ದೆಹಲಿಗೆ ವರ್ಗಗೊಂಡಿತು (1927). ಇದರ ಪ್ರಥಮ ಅಧ್ಯಕ್ಷ ಬ್ರೂಸ್ ಟರ್ನ್ ಬುಲ್. ಒಲಿಂಪಿಕ್ಸ್ ಸ್ಥಾನ ದೊರೆತದ್ದು 1908ರಲ್ಲಿ. ಅನಂತರ ತಡವಾಗಿ ಮಹಿಳೆಯರ ಹಾಕಿಗೆ ಒಲಿಂಪಿಕ್ಸ್‍ನಲ್ಲಿ ಸ್ಥಾನ ಲಭಿಸಿತು (1980). 

	ಹಾಕಿಯ ಪ್ರತಿ ತಂಡದಲ್ಲಿ 11 ಆಟಗಾರರು. ಇವರ ಜೊತೆಗೆ ಕಾಯ್ದಿಟ್ಟ 5 ಜನ ಆಟಗಾರರಿರುತ್ತಾರೆ. ಆಟದ ಅವಧಿ 70 ನಿಮಿಷಗಳು. ಪ್ರಥಮಾರ್ಧದ ಅನಂತರ 5 ನಿಮಿಷ ವಿರಾಮ ನೀಡಲಾಗುತ್ತದೆ. ಒಂದು ವೇಳೆ ಆಟ ಟೈ (ಸಮ) ಆದರೆ 15 ನಿಮಿಷಗಳ ಅಧಿಕ ಸಮಯ ನೀಡಲಾಗುತ್ತದೆ. ಮತ್ತೆ ಸಮನಾದರೆ ಟೈ ಬ್ರೇಕರ್ ಅಂದರೆ ಪ್ರತಿ ತಂಡಕ್ಕೂ ನಿಗದಿತ ಪೆನಾಲ್ಟಿಸ್ಟ್ರೋಕ್ ಕೊಡಲಾಗುತ್ತದೆ. ಆಗಲೂ ಸ್ಕೋರು ಸಮನಾದರೆ ಸಡನ್ ಡೆತ್ ಅಂದರೆ ಮೊದಲು ಗೋಲ್ ಆಗುವವರೆಗೆ ಆಟ ಮುಂದುವರಿಯುತ್ತದೆ. 

	ಆಟದ ಮೈದಾನ : 91.4 ಮೀ ಉದ್ದ 32.9 ಮೀ ಅಗಲದ ಸಮತಟ್ಟಾದ ನೆಲ-ಹುಲ್ಲುಹಾಸಿನ ಅಥವಾ ಕೃತಕವಾದ ಸಿಂಥೆಟಿಕ್ ಹುಲ್ಲು ಹಾಸಿನ ಮೈದಾನವನ್ನು ಸೀಮಾರೇಖೆಗಳಿಂದ ಗುರುತಿಸಲಾಗು ವುದು. ಇದರಲ್ಲೊಂದು ಮಧ್ಯರೇಖೆ ಇರುತ್ತದೆ. ಈ ಮಧ್ಯರೇಖೆಯ ಎರಡೂ ಪಕ್ಕಗಳಲ್ಲಿ ಪ್ರತಿ ಕಡೆಯೂ 22.85 ಮೀ ರೇಖೆಗಳನ್ನು ಎಳೆದು ವಿಭಜನೆ ಮಾಡಲಾಗುವುದು. ಮೈದಾನದ 4 ಮೂಲೆಗಳಲ್ಲೂ ಗೋಲ್ ಲೈನಿನ ಮೇಲೆ 4.57 ಮೀ ಪ್ರದೇಶವನ್ನು ಗುರುತಿಸಲಾಗುವುದು. ಗೋಲ್ ರೇಖೆಗಳ ಮಧ್ಯೆ 3.66 ಮೀ ಉದ್ದವನ್ನು ಗುರುತಿಸಿ ಅಲ್ಲಿ ಗೋಲ್ ಬಾಕ್ಸ್‍ಗಳನ್ನು ಸ್ಥಾಪಿಸಲಾಗುವುದು. ಗೋಲ್ ಪೋಸ್ಟ್‍ಗಳ ಎದುರಿಗೆ ಅಂಗಳದೊಳಗೆ ಪೋಸ್ಟ್‍ಗಳಿಂದ 14.62 ದೂರದಲ್ಲಿರುವಂತೆ ಇಂಗ್ಲಿಷಿನ ಡಿ ಅಕ್ಷರ ವಿನ್ಯಾಸದ ಅರ್ಧ ವೃತ್ತ ರಚಿಸಲಾಗುತ್ತದೆ. ಗೋಲ್ ಪೋಸ್ಟ್‍ಗಳ ನಡುವಿನ ಬಿಂದುವಿನಿಂದ 6.37 ಮೀ ದೂರದಲ್ಲಿ ಒಂದು ಬಿಂದುವನ್ನು ಗುರುತಿಸಲಾಗುತ್ತದೆ. ಇದು ಪೆನಾಲ್ಟಿ ಸ್ಟ್ರೋಕ್ ಪಾಯಿಂಟ್. ಮೈದಾನದ ನಾಲ್ಕೂ ಮೂಲೆಗಳಲ್ಲಿ 1.22 ಮೀ ನಿಂದ 1.52 ಮೀ ವರೆಗೆ ಎತ್ತರವಿರುವ ನಾಲ್ಕು ಬಾವುಟಗಳನ್ನು ನೆಡಲಾಗುತ್ತದೆ. 

	ಹಾಕಿ ಆಟದ ಪರಿಕರಗಳು : 

	ಸ್ಟಿಕ್ : ಮರ ಅಥವಾ ಫೈಬರ್‍ನಿಂದ ರಚಿತವಾದ ಎಲ್ ಆಕಾರದ ಕೋಲನ್ನು ಬ್ಯಾಟ್ ಎಂದು ಕರೆಯುವರು. ಇದರ ತಳ ಭಾಗದ ಎಡಮಗ್ಗುಲು ಸಮತಟ್ಟಾಗಿಯೂ ಬಲಮಗ್ಗುಲು ಉಬ್ಬಿಯೂ ಇರುತ್ತದೆ. ಈ ಭಾಗಕ್ಕೆ ಬ್ಲೇಡ್ ಎನ್ನುವರು. ಪೂರ್ಣ ಸ್ಟಿಕ್‍ನ ವ್ಯಾಸ ಪುರುಷರಿಗೆ 5.10 ಸೆಮೀ ಉಂಗುರದಲ್ಲೂ ಮಹಿಳೆಯರಿಗೆ 5 ಸೆಮೀ ಉಂಗುರದಲ್ಲೂ ಹಾಯ್ದುಹೋಗುವಷ್ಟಿರಬೇಕು. ಸ್ಟಿಕ್‍ನ ಉದ್ದ 30-34 ಅಂಗುಲಗಳು.

	ಚೆಂಡು : ಬಿಳಿಯ ಬಣ್ಣದ ಚರ್ಮದ ಚೆಂಡು ಬಳಸಲಾಗುತ್ತದೆ. ಇದರ ಸುತ್ತಳತೆ 22.4 ಸೆಮೀ ನಿಂದ 23.5 ಸೆಮೀ; ತೂಕ 156 ರಿಂದ 163 ಗ್ರಾಂ. 
ಆಟದ ನಿಯಮಗಳು : 

1. 	ಸ್ಟಿಕ್ ಬ್ಲೇಡಿನ ಸಮತಟ್ಟಾದ ಭಾಗದಿಂದ ಮಾತ್ರ ಚೆಂಡನ್ನು ಚಲಿಸಬೇಕು. ಸ್ಟಿಕ್ ನಿರೀಕ್ಷಕನ (ರೆಫರಿ) ನಿರೀಕ್ಷೆಗೊಳಗಾಗಿರಬೇಕು. ಅವನ ಅನುಮತಿಯಿಲ್ಲದೆ ಸ್ಟಿಕ್ ಬದಲಾಯಿಸುವಂತಿಲ್ಲ. ಫ್ರೀಹಿಟ್ ಮಾಡುವಾಗ ಸ್ಟಿಕ್ ಬದಲಿಸುವಂತಿಲ್ಲ. 

2.	 ಆಟಗಾರ ಅಪಾಯಕರ ಚಟುವಟಿಕೆಗಿಳಿದಾಗ ನಿರೀಕ್ಷಕ ಎಚ್ಚರಿಕೆ ಕೊಡುವನು. ಮತ್ತೂ ಮುಂದುವರಿದರೆ ಐದು ನಿಮಿಷ ಮೈದಾನದಿಂದ ಹೊರಹಾಕುವನು. ಆಗ ಬದಲಿ ಆಟಗಾರ ಒಳಬರುವಂತಿಲ್ಲ. 

3. ಕಾರ್ನರ್, ಪೆನಾಲ್ಟಿ ಕಾರ್ನರ್, ಸ್ಟ್ರೋಕ್ ಮುಂತಾದ ಸಂದರ್ಭಗ ಳಲ್ಲಿ ಆಟಗಾರನನ್ನು ಬದಲಾಯಿಸುವಂತಿಲ್ಲ. ಆಟ ನಿಂತಾಗ ಅನುಮತಿ ಪಡೆದು ಆಟಗಾರನನ್ನು ಬದಲಿಸಬಹುದು. 

4.	 ಮಧ್ಯಾಂತರದ ಅನಂತರ ಅಂಕಣವನ್ನು ಬದಲಿಸಿಕೊಳ್ಳಬೇಕು. 

5.	 ಸ್ಟಿಕ್ ಅನ್ನು ಹೆಗಲ ಮಟ್ಟಕ್ಕಿಂತ ಮೇಲೇರಿಸುವಂತಿಲ್ಲ. ಸ್ಟಿಕ್‍ನಿಂದ ಎದುರಾಳಿಯನ್ನು ತಡೆಯುವುದು, ದೂಡುವುದು, ಹೊಡೆಯುವುದು ಇತ್ಯಾದಿಗಳನ್ನು ಫೌಲ್ ಎಂದು ಕರೆಯಲಾಗುತ್ತದೆ. ಇಂಥ ಫೌಲ್‍ಗಳಿಗೆ ದಂಡವಾಗಿ ಎದುರಾಳಿ ತಂಡಕ್ಕೆ ಹಿಟ್ ಅವಕಾಶ ಕೊಡಲಾಗುತ್ತದೆ. 

6. ಗೋಲ್ ಕೀಪರ್ ಹೊರತು ಇತರ ಆಟಗಾರರು ಚೆಂಡನ್ನು ಶರೀರಕ್ಕೆ ತಗುಲಿಸುವುದು ಫೌಲ್. ಗೋಲ್‍ಕೀಪರ್ ತನ್ನ ಸರ್ಕಲ್ ಒಳಗೆ ಮಾತ್ರ ಸ್ಟಿಕ್ ಅಲ್ಲದೆ ತನ್ನ ಶರೀರದ ಯಾವುದೇ ಭಾಗದಿಂದ ಚೆಂಡನ್ನು ತಡೆಯಬಹುದು. ಆತನೂ ಗೋಲ್ ಸರ್ಕಲ್‍ನಿಂದ ಹೊರಗಿರು ವಾಗ ಇತರರಂತೆ ಸ್ಟಿಕ್‍ನಿಂದ ಮಾತ್ರ ಚೆಂಡನ್ನು ಮುಟ್ಟಬೇಕು.

7.	 ಚೆಂಡು ಪಕ್ಕದ ಸೀಮಾರೇಖೆಗಳಿಂದಾಚೆ ಹೋದರೆ-ಹಾಗೆ ಆಚೆ ಹೋಗುವ ಮುಂಚೆ ಯಾವ ಆಟಗಾರನಿಗೆ ತಾಗಿರುತ್ತದೋ ಅವನ ಎದುರಾಳಿ ತಂಡಕ್ಕೆ ಹಿಟ್ ಸಿಗುತ್ತದೆ. ಎದುರಾಳಿ ಆಟಗಾರ ಸೀಮಾ ರೇಖೆಯ ಮೇಲೆ ಚೆಂಡನ್ನಿಟ್ಟು ಒಳ ಹೊಡೆಯಬೇಕು. 

8.	 ರಕ್ಷಣಾ ಆಟಗಾರನಿಗೆ ತಾಗಿ ಗೋಲ್ ರೇಖೆಯ ಸೀಮೆಯಿಂದಾಚೆ ಚೆಂಡು ಹೋದರೆ ಫ್ರೀ ಹಿಟ್ ಅವಕಾಶ ದೊರೆಯುವುದು. ಎದುರಾಳಿ ತಂಡದವನೊಬ್ಬ ಚೆಂಡನ್ನು ಗೋಲ್ ಲೈನಿನ ಅದೇ ಮೂಲೆಯಲ್ಲಿಟ್ಟು ಒಳ ಹೊಡೆಯುವನು. 

9.	 ರಕ್ಷಣಾ ಆಟಗಾರ ತನ್ನ ಕಡೆಯ 22.85 ಮೀ ರೇಖೆಯ ಒಳಗೆ ದಾಳಿಗಾರನಿಗೆ ಸ್ಟಿಕ್‍ನಿಂದ ತಾಗಿಸಿದರೆ, ಹೊಡೆದರೆ, ಎಳೆದರೆ ಅಥವಾ ಉದ್ದೇಶಪೂರ್ವಕ ತನ್ನ ಗೋಲ್ ರೇಖೆಯಿಂದಾಚೆಗೆ ಕಳುಹಿಸಿದರೆ ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯುತ್ತದೆ. 

10. ರಕ್ಷಣಾ ಆಟಗಾರ ತನ್ನ ಷೂಟಿಂಗ್ ಸರ್ಕಲ್‍ನಲ್ಲಿ ಫೌಲ್ ಮಾಡಿದರೆ ಎದುರಾಳಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ದೊರೆಯುತ್ತದೆ. 

11.	ಗೋಲ್ ಆಗುವುದನ್ನು ತಪ್ಪಿಸಲು ರಕ್ಷಣಾ ಆಟಗಾರ ತನ್ನ ಡಿ ಒಳಗೆ ಉದ್ದೇಶ ಪೂರ್ವಕ ಫೌಲ್ ಮಾಡಿದರೆ ಎದುರಾಳಿಗೆ ಪೆನಾಲ್ಟಿ ಸ್ಟ್ರೋಕ್ ದೊರೆಯುವುದು. 

12.	 ಫ್ರೀ ಹಿಟ್ ಅಂದರೆ ಫೌಲ್ ಮಾಡಿದ ಜಾಗದಲ್ಲಿ ಚೆಂಡನ್ನಿಟ್ಟು ಎದುರಾಳಿ ಅದನ್ನು ಹೊಡೆಯುತ್ತಾನೆ ಅಥವಾ ನೆಲದಲ್ಲೇ ಗುಡುಗುವಂತೆ ನೂಕುತ್ತಾನೆ. ಫೌಲ್ ಮಾಡಿದ ತಂಡದವರು ಕನಿಷ್ಠ 5 ಗಜ ದೂರದಲ್ಲಿರಬೇಕು. 

13.	ಕಾರ್ನರ್ ಎಂದರೆ ಚೆಂಡು ಹೊರಬಿದ್ದ ಗೋಲ್ ರೇಖೆಯ ಮೂಲೆಯಲ್ಲಿ ಚೆಂಡನ್ನಿಟ್ಟು ಹೊಡೆಯುವ ಅವಕಾಶ. ಮೂಲೆಯ ಬಾವುಟದ ಹತ್ತಿರ 4.57 ಮೀ ಪ್ರದೇಶದಲ್ಲಿ ಚೆಂಡನ್ನಿಟ್ಟು ಹೊಡೆಯಬೇಕು.

14. ಪೆನಾಲ್ಟಿ ಕಾರ್ನರ್ ಎಂದರೆ ದಾಳಿಗಾರ ತಂಡವನ್ನು ತನ್ನ ಇಚ್ಛೆಯಂತೆ ಗೋಲ್ ಪೋಸ್ಟ್ ಒಂದರ 14.62 ಮೀ ಅಂತರದಲ್ಲಿ ಮಾಡಲಾದ ಗುರುತಿನ ಮೇಲೆ ಚೆಂಡನ್ನಿಟ್ಟು ಹೊಡೆಯುತ್ತಾನೆ. ಉಳಿದ ಆಟಗಾರರು ಷೂಟಿಂಗ್ ಸರ್ಕಲ್‍ನಿಂದ ಹೊರಗೆ ನಿಲ್ಲಬೇಕು. ಚೆಂಡನ್ನು ಹೊಡೆದ ಅನಂತರ ಸರ್ಕಲ್ ಪ್ರವೇಶಿಸಬಹುದು. ಹೀಗೆ ಚೆಂಡು ಹೊಡೆದ ಆಟಗಾರ, ಚೆಂಡು ಮತ್ತೊಬ್ಬನನ್ನು ತಾಗುವ ಮೊದಲು ಮತ್ತೆ ಚೆಂಡನ್ನು ಮುಟ್ಟುವಂತಿಲ್ಲ. ರಕ್ಷಣಾ ಆಟಗಾರರು 7.31 ಮೀ ದೂರದಲ್ಲಿರಬೇಕು. ಗೋಲ್ ಕೀಪರ್‍ನ ನೆರವಿಗೆ ರಕ್ಷಣಾ ತಂಡದ ನಾಲ್ವರು ಆಟಗಾರರು ಮಾತ್ರ ನಿಲ್ಲಬಹುದು. 

15.	 ಪೆನಾಲ್ಟಿ ಸ್ಟ್ರೋಕ್‍ನಲ್ಲಿ ಗೋಲ್ ಕೀಪರ್ ಗೋಲ್ ರೇಖೆಯ ಮೇಲೆ ನಿಲ್ಲಬೇಕು. ಒಮ್ಮೆ ಹೀಗೆ ನಿಂತಮೇಲೆ ಚೆಂಡು ಆಟದಲ್ಲಿ ತೊಡಗುವವರೆಗೆ ಸರಿಯುವಂತಿಲ್ಲ. ಚೆಂಡನ್ನು ಪೆನಾಲ್ಟಿ ಸ್ಟ್ರೋಕ್ ಪಾಯಿಂಟ್‍ನಲ್ಲಿರಿಸಿ ಎದುರಾಳಿ ಹೊಡೆಯುತ್ತಾನೆ ಅಥವಾ ದೂಡುತ್ತಾನೆ ಅಥವಾ ಚಿಮ್ಮುತ್ತಾನೆ. ಹೀಗೆ ಮಾಡಿದ ಅನಂತರ ಅವನು ಚೆಂಡನ್ನು ಹಿಂಬಾಲಿಸುವಂತಿಲ್ಲ. ಇತರ ಆಟಗಾರರು 22.85 ಮೀ ಗೆರೆಯಾಚೆ ನಿಲ್ಲಬೇಕು. 

	ಭಾರತದಲ್ಲಿ ಹಾಕಿಯ ಸ್ವರ್ಣ ಯುಗ : 1908ರಲ್ಲಿ ಹಾಕಿಗೆ ಒಲಿಂಪಿಕ್ಸ್‍ನಲ್ಲಿ ಸ್ಥಾನದೊರೆಯಿತು. ಹಾಕಿ ಭಾರತದ ಪ್ರಮುಖ ಕ್ರೀಡೆ. ಮುಖ್ಯವಾಗಿ ಸೇನಾ ತಂಡಗಳು ಶಿಸ್ತಿನಿಂದ ಈ ಆಟವನ್ನಾಡಿ ಅದಕ್ಕೊಂದು ಗಾಂಭೀರ್ಯದ ಸೊಗಸನ್ನಿತ್ತರು. ಆಟ ಪರಿಶುದ್ಧವಾಗಿತ್ತು. ಹಾಕಿಪಟುಗಳು ಜನಾಕರ್ಷಣೀಯ ಕೇಂದ್ರಗಳಾಗಿದ್ದರು. ಧ್ಯಾನಚಂದ್, ರೂಪ್‍ಚಂದ್, ಕ್ಲಾಡಿಯಸ್‍ರಂಥವರು ದೇಶಾದ್ಯಂತ ಹೊಗಳಿಕೆ  ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸ್ಟಿಕ್ ಚಮತ್ಕಾರಗಳಿಗೆ ಜನ ಮರುಳಾಗುತ್ತಿದ್ದರು. ಧ್ಯಾನ್‍ಚಂದ್‍ರಂತೂ ಹಾಕಿ ಗಾರುಡಿಗರೆಂದೇ ಹೆಸರಾಗಿದ್ದರು. ಹಾಕಿ ಪಂದ್ಯ ಕ್ರೀಡಾಂಗಣಗಳು ಕ್ರೀಡಾ ಪ್ರೇಮಿಗಳಿಂದ ತುಂಬಿ ತುಳುಕುತ್ತಿದ್ದುವು. ಪ್ರತಿ ಯುವಕನೂ ಹಾಕಿಪಟುವಾಗುವ ಕನಸುಕಾಣುತ್ತಿದ್ದ. 

	ಹಾಲೆಂಡ್‍ನ ಆಮ್‍ಸ್ಟರ್ ಡ್ಯಾಂನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕವನ್ನು ಪಡೆದ (1928) ಭಾರತ ಸತತವಾಗಿ ಚಿನ್ನದ ಪದಕಗಳನ್ನು ಗಳಿಸುತ್ತಲೇ ಬಂತು (1928-56). ಈ ಮಧ್ಯೆ 1940 ಮತ್ತು 1944 ರಲ್ಲಿ ಯುದ್ಧದ ಕಾರಣದಿಂದ ಒಲಿಂಪಿಕ್ಸ್ ನಡೆಯಲಿಲ್ಲ. ತರುವಾಯ ಭಾರತಕ್ಕೆ ಇನ್ನೊಮ್ಮೆ ಚಿನ್ನದ ಪದಕ ದೊರೆಯಿತು (1948). ಹೀಗೆ ಸತತ 6 ಬಾರಿ ಚಿನ್ನದ ಪದಕ ಗೆದ್ದ ಭಾರತ ತಂಡ ಇಟಲಿಯ ರೋಮ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಪಾಕಿಸ್ತಾನಕ್ಕೆ ಮಣಿದು ರಜತ ಗಳಿಸುವಂತಾಯಿತು (1960). ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಮತ್ತೊಮ್ಮೆ ಚಿನ್ನದಪದಕ ಭಾರತಕ್ಕೆ ಲಭಿಸಿತು (1964). ಆದರೆ ಮೆಕ್ಸಿಕೋ ಮತ್ತು ಮ್ಯೂನಿಚ್ ಒಲಿಂಪಿಕ್ಸ್‍ಗಳಲ್ಲಿ ಕಂಚಿನ ಪದಕ ದೊರಕಿತು (1968,72). ಮಾಂಟ್ರಿಯಲ್ ಒಲಿಂಪಿಕ್ಸ್‍ನಲ್ಲಿ ಯಾವ ಪದಕವೂ ದೊರಕಲಿಲ್ಲ (1976). ತರುವಾಯ ಮಾಸ್ಕೋ ಒಲಿಂಪಿಕ್ಸ್‍ನಲ್ಲಿ ಮತ್ತೆ ಚಿನ್ನದ ಪದಕ ದೊರಕಿತು (1980). ಇದುವರೆಗೆ (2004) ಒಲಿಂಪಿಕ್ಸ್ ಪಂದ್ಯಗಳಲ್ಲಿ ಒಟ್ಟಾರೆಯಾಗಿ ಭಾರತ 15 ಪದಕಗಳನ್ನು ಗಳಿಸಿದ್ದು ಇವುಗಳಲ್ಲಿ 11 ಪದಕಗಳು ಹಾಕಿಯಿಂದ ಲಭ್ಯವಾಗಿವೆ. 

	ಭಾರತದ ಪ್ರಸಿದ್ಧ ಹಾಕಿ ಕ್ರೀಡಾಳುಗಳಲ್ಲಿ ಲೆಸ್ಲಿ ಡಬ್ಲೂ ಕ್ಲಾಡಿಯಸ್, ರಿಚರ್ಡ್ ಜೇಮ್ಸ್ ಆಲನ್, ರೂಪ್‍ಸಿಂಗ್, ಧ್ಯಾನಚಂದ್ (ನೋಡಿ- ಧ್ಯಾನ್‍ಚಂದ್), ಬಲಬೀರ್‍ಸಿಂಗ್, ಕುಂವರ್ ದಿಗ್ವಿಜಯ ಸಿಂಗ್‍ಬಾಬು, ರಣಧೀರ ಸಿಂಗ್ ಜಂಟ್ಲೆ, ಪ್ರೀತಿಪಾಲ್‍ಸಿಂಗ್ ಮತ್ತು ಧನರಾಜ್ ಪಿಳ್ಳೆ ಖ್ಯಾತನಾಮರಾಗಿದ್ದಾರೆ.							
(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ